ತುಕಾರಾಮ
ಸು. 1598-1649. ಸಂತ. ಜ್ಞಾನದೇವ, ಏಕನಾಥ, ರಾಮದಾಸರಂತೆ ಈತನ ಹೆರು ಮಹಾರಾಷ್ಟ್ರ ಸಂತರ ಅಗ್ರಪಂಕ್ತಿಯಲ್ಲಿದೆ. ಹುಟ್ಟಿದ್ದು ದೇಹು ಎಂಬ ಗ್ರಾಮದ ಬಡ ಒಕ್ಕಲಿಗರ ಕುಟುಂಬದಲ್ಲಿ. ಜಾತಿಯಿಂದ ಮರಾಠ. ಚಿಕ್ಕಂದಿನಿಂದಲ್ಲೇ ಅನಾಥನಾದ ಈ ಬಾಲಕ ಬಾಲ್ಯದಲ್ಲಿ ಬಹಳ ಕಷ್ಟಗಳನ್ನು ಅನುಭವಿಸಿದ. ಈತನ ಮನೆತನದವರು ಪಂಢರಪುರದ ವಿಠೋಬನ ಪರಮ ಭಕ್ತರು. ಈತನ ಮೊದಲ ಮದುವೆ ಹದಿನೈದನೆಯ ವಯಸ್ಸಿನಲ್ಲಿಯೇ ಆಯಿತು. ಆದರೆ ಹೆಂಡತಿ ಮಗ ಬರಗಾಲದಲ್ಲಿ ಅನ್ನವಿಲ್ಲದೆ ಸತ್ತರು. ತಂದೆ ತಾಯಂದಿರು ಮೊದಲೇ ತೀರಿಕೊಂಡಿದ್ದರು. ಬರಗಾಲದಿಂದಾಗಿ ಆರ್ಥಿಕ ಸಂಕಟಕ್ಕೆ ಒಳಗಾದ ತುಕಾರಾಮ ಜನರಿಂದ ಅವಮಾನಿತನಾದ. ಸಾಲದ್ದಕ್ಕೆ ಎರಡನೆಯ ಹೆಂಡತಿ ಜೀಜಾಬಾಯಿ ಕರ್ಕಶಿ, ಗಯ್ಯಾಳಿ, ಕೃಪಣಿಯಾಗಿದ್ದಳು. ಇದರಿಂದಾಗಿ ಈತನ ಸಾಂಸಾರಿಕ ಜೀವನ ದುಃಖಮಯವಾಯಿತು. ಪತಿ ಮಾಡುವ ಸಾಧು ಸಂತರ ಸೇವೆಗೆ ಈಕೆ ಅಡ್ಡಿ ತರುತ್ತಿದ್ದಳು. ಏತನ್ಮಧ್ಯೆ, ತುಕಾರಾಮ ಕಟ್ಟಿಸಿದ ಗುಡಿಯೂ ಉರುಳಿ ಬಿತ್ತು. ಊರವರು ಈತನನ್ನು ನ್ಯಾಯಾಲಯಕ್ಕೆ ಎಳೆದರು ಈ ಎಲ್ಲ ಸಂಕಟಗಳಿಗೆ ಪರಿಹಾರ ಹರಿಭಜನೆ ಒಂದೇ ಎಂದು ತುಕಾರಾಮ ನಂಬಿದ. ಅಂದಿನಿಂದ ನಿತ್ಯ ಹರಿಕೀರ್ತನೆಯನ್ನೂ ಏಕಾದಶಿಯಂದು ಉಪವಾಸವನ್ನೂ ಆರಂಭಿಸಿದ. ಜ್ಞಾನದೇವ, ನಾಮದೇವ, ಏಕನಾಥರ ವಚನಗಳನ್ನು ಕೀರ್ತನೆ ಮಾಡತೊಡಗಿದ. ಮುಂದೆ ಭಾಮನಾಥ, ಭಂಡಾರಾ ಗುಡ್ಡಗಳಲ್ಲಿದ್ದುಕೊಂಡು ಏಕಾಂತ ವಾಸಿಯಾಗಿ ಭಗವದ್ ಭಜನೆಯಲ್ಲಿ ನಿರತನಾದ. ತನ್ನ ಮೂವತ್ತೊಂದನೆಯ ವಯಸ್ಸಿನಲ್ಲಿ, ಮಾಘ ಶುದ್ಧ 10 ಗುರುವಾರದಂದು ಈತನಿಗೆ ಸ್ವಪ್ನದಲ್ಲಿ ಗುರು ದರ್ಶನವಾಯಿತು. ದರ್ಶನ ನೀಡಿದ ಗುರುಗಳು ಬಾಬಾಜಿಯೇ ತಾವೆಂದು ತಮ್ಮದು ರಾಘವ ಚೈತನ್ಯ, ಕೇಶವ ಚೈತನ್ಯರ ಪರಂಪರೆಯೆಂದು ಹೇಳಿ ರಾಮ ಕೃಷ್ಣ ಹರಿ ಎಂಬ ನಾಮ ಮಂತ್ರವನ್ನು ತುಕಾರಾಮನಿಗೆ ದಯಪಾಲಿಸಿದರು. ಇದೇ ತುಕಾರಾಮನ ಪ್ರೀತಿಯ ಮಂತ್ರವಾಯಿತು, ಮುಂದೆ ಕೆಲಕಾಲದಲ್ಲಿ ಈತನಿಗೆ ನಾಮದೇವ ಕನಸಿನಲ್ಲಿ ದರ್ಶನವಿತ್ತು, ಶತಕೋಟಿ ಅಭಂಗ (ನೋಡಿ- ಅಭಂಗ) ರಚನೆಯ ಪ್ರತಿಜ್ಞೆಯನ್ನು ಪೂರ್ತಿಗೊಳಿಸಲು ಸೂಚಿಸಿದ ಎನ್ನಲಾಗಿದೆ. ಈತನ ಅಭಂಗಗಳು ಪಂಡಿತರನ್ನು ಕೆಣಕಿದವು. ಅವರು ಅದನ್ನು ಇಂದ್ರಾಯಣೀ ನದಿಯಲ್ಲಿ ಮಳುಗಿಸಿದರು. ಇದರಿಂದ ತುಕಾರಾಮನಿಗೆ ಕಳವಳವಾಯಿತು. ಹದಿಮೂರು ದಿನ ಉಪವಾಸ ಮಾಡಿದ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳಲು ಹವಣಿಸಿದ. ಆಗ ಪರಮಾತ್ಮನೇ ಬಾಲರೂಪದಿಂದ ಬಂದು ಅಭಂಗದ ಹಾಳೆಗಳನ್ನು ತಂದಿತ್ತನಂತೆ. ಛತ್ರಪತಿ ಶಿವಾಜಿ ಈತನ ಭಕ್ತನಾಗಿದ್ದ. ಶಿವಾಜಿ ರಾಷ್ಟ್ರಭಕ್ತಿಯನ್ನು ದೃಢಪಡಿಸಿದರೆ ಈತ ದೈವಭಕ್ತಿಯನ್ನು ಊರ್ಜಿತಗೊಳಿಸಿದ. ನಿರ್ಯಾಣಕಾಲಕ್ಕೆ ಈತನ ದೇಹ ತಪಸ್ಸಿನಿಂದಲೂ ಭಕ್ತಿಯಿಂದಲೂ ದಿವ್ಯತ್ವವನ್ನು ಹೊಂದಿದ್ದುದಲ್ಲದೆ ಈತ ಸದೇಹಿಯಾಗಿ ವೈಕುಂಠಕ್ಕೆ ಹೋದ ಎನ್ನಲಾಗಿದೆ.

	ತುಕಾರಾಮನ ಉಪದೇಶ ವಿವಿಧ ಮುಖವಾದುದು. ಸಾಧಕ ಎಲ್ಲ ವಿಷಯಗಳಲ್ಲಿ ಉದಾಸೀನನಾಗಿರಬೇಕು. ಆಲಸ್ಯ, ನಿದ್ರೆಗಳಿಗೆ ಶರಣು ಹೊಡೆದು, ಭಗವಂತನಲ್ಲಿ ಮನಸ್ಸನ್ನು ಸ್ಥಿರಗೊಳಿಸಬೇಕು; ಪ್ರಪಂಚ-ಪರಮಾರ್ಥಗಳನ್ನು ಕೂಡಿಯೇ ಸಾಧಿಸುವುದು ಮರಳುತನ; ಸಂಸಾರದ ಬಂಧನವನ್ನು ಸಡಿಲಿಸಿ, ಹಿಂದಿನ ಹಿರಿಯರ ಮಾರ್ಗದಲ್ಲಿ ಸಾಗಬೇಕು; ಸುಖ-ದುಃಖಗಳನ್ನು ಸಮನಾಗಿ ಭಾವಿಸಬೇಕು; ಮೈಯನ್ನು ತೊಳೆಯುವುದಕ್ಕಿಂತ ಮನವನ್ನು ನಿರ್ಮಲಗೊಳಿಸುವುದೇ ಮೇಲು; ಭಗವನ್ ನಾಮಸ್ಮರಣೆಯೇ ಭಗವಂತನನ್ನು ಕಾಣುವ ಏಕಮಾತ್ರ ಸಾಧನೆ; ಭಗವತ್ ಕೀರ್ತನೆಯ ಮಹತ್ತ್ವ ದೊಡ್ಡದು; ಭಗವಂತನನ್ನು ಪಡೆಯಲು ಜಾತಿಪಂಥಗಳು ಅಡ್ಡಬರುವುದಿಲ್ಲ- ಇವೇ ಮೊದಲಾದವು ಈತನ ಉಪದೇಶವಾಕ್ಯಗಳಾಗಿವೆ. ಈತನ ವಾಣಿ ಬೆಣ್ಣೆಗಿಂತ ಮೃದು: ಕಲ್ಲಿಗಿಂತ ಕಠೋರ ಎಂಬ ಮಾತು ಸತ್ಯ.

	ತುಕಾರಾಮನ ಭಕ್ತರು ಜಾತಿ, ಮತ, ದೇಶಭೇದಗಳನ್ನು ಮೀರಿ ಹಬ್ಬಿದ್ದಾರೆ. ಈತನ ನೆನಪಿಗಾಗಿ ಈತನ ಪುಣ್ಯತಿಥಿಯ ದಿನ ಪಂಢರಪುರದ ವಿಟ್ಠಲನಿಗೆ ನುಚ್ಚಿನ ನೈವೇದ್ಯ ಮಾಡುತ್ತಾರೆ. 				(ಎಂ.ಎ.; ಡಿ.ಆರ್.ಬಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ